ಕ್ರಯ ವಿಕ್ರಯ ಆಯ್ಕೆ ಹಕ್ಕು	

ಭವಿಷ್ಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತಗಳ ನಿರೀಕ್ಷೆಯಿಂದ ನಿರ್ವಹಿಸುವ ಸಟ್ಟಾ ವ್ಯವಹಾರಗಳ ಅಂಗವಾಗಿಯೋ ಇಂಥ ಬದಲಾವಣೆಗಳ ಫಲವಾಗಿ ಸಂಭವಿಸುವ ನಷ್ಟಗಳ ವಿರುದ್ಧ ರಕ್ಷಣೆ ಏರ್ಪಡಿಸಿಕೊಳ್ಳುವುದಕ್ಕಾಗಿಯೋ ಮಾಡಿಕೊಳ್ಳುವ ಕರಾರುಗಳ ಪ್ರಕಾರ ಪ್ರಾಪ್ತವಾಗುವ ಹಕ್ಕು (ಫುಟ್ ಅಂಡ್ ಕಾಲ್). ಮಾರುಕಟ್ಟೆಯಲ್ಲಿ ಒಂದು ಪದಾರ್ಥದ ಬೆಲೆ ಇಳಿದಿದ್ದಾಗ್ಯೂ ಅದರ ನಿಗದಿಯಾದ ಒಂದು ಪರಿಮಾಣವನ್ನು ಒಂದು ನಿಶ್ಚಿತ ಬೆಲೆಯಲ್ಲಿ ಒಬ್ಬ ಇನ್ನೊಬ್ಬನಿಗೆ ವಿಕ್ರಯಿಸಲು ಪಡೆದುಕೊಂಡದ್ದು ವಿಕ್ರಯ ಆಯ್ಕೆ ಹಕ್ಕು (ಫುಟ್); ಒಂದು ಪದಾರ್ಥದ ನಿಗದಿಯಾದ ಪರಿಮಾಣವನ್ನು ಒಂದು ನಿಶ್ಚಿತ ಬೆಲೆಯಲ್ಲಿ ಕೊಳ್ಳಲು ಪಡೆದುಕೊಂಡದ್ದು ಕ್ರಯ ಆಯ್ಕೆ ಹಕ್ಕು (ಕಾಲ್). ತನಗೆ ಅನುಕೂಲ ತೋರಿದಂತೆ ಅದನ್ನು ಕ್ರಯಿಸುವ ಅಥವಾ ವಿಕ್ರಯಿಸುವ-ಎರಡೂ ಬಗೆಯ-ಹಕ್ಕನ್ನು ಪಡೆದುಕೊಂಡರೆ ಅದು ಕ್ರಯ ವಿಕ್ರಯ ಆಯ್ಕೆ ಹಕ್ಕು ಅಥವಾ ಉಭಯ ಆಯ್ಕೆ ಹಕ್ಕು.

ಉದಾಹರಣೆಗೆ ಒಂದು ಕಂಪನಿಯ ಷೇರು ಬೆಲೆ ರೂ.80 ಆಗಿದ್ದು, ಮುಂದಿನ ಮೂರು ತಿಂಗಳುಗಳೊಳಗೆ ಅದು ರೂ.95ಕ್ಕೆ ಏರುವ ಸಂಭವ ಇರುವುದೆಂದು ಒಬ್ಬ ವ್ಯಕ್ತಿ (ಂ) ಭಾವಿಸಿ, ಆ ಕಂಪನಿಯ 100 ಷೇರುಗಳನ್ನು ಕೊಳ್ಳಬೇಕೆಂದು ಆತ ಬಯಸಬಹುದು. ಅವನು ಅಷ್ಟೊಂದು ಷೇರುಗಳನ್ನು ಕೊಂಡಾಗ ಒಂದು ವೇಳೆ ಅವನ ನಿರೀಕ್ಷೆಯಂತೆ ಮಾರುಕಟ್ಟೆ ಪರಿಸ್ಥಿತಿ ಇಲ್ಲದಿದ್ದರೆ ಅವನಿಗೆ ನಷ್ಟವಾಗುವ ಸಂಭವವುಂಟು. ಅಲ್ಲದೆ ಅಷ್ಟೊಂದು ಷೇರುಗಳನ್ನು ಕೊಳ್ಳಲು ಅವನು ಹೆಚ್ಚು ಹಣ ತೊಡಗಿಸಬೇಕಾಗುತ್ತದೆ. ಇದರ ಬದಲು ಆತ ಇನ್ನೊಬ್ಬನಿಗೆ (ಃ) ರೂ.500 ಆಯ್ಕೆ ಹಕ್ಕು ಧನ ಕೊಟ್ಟು ಕ್ರಯ ಆಯ್ಕೆ ಹಕ್ಕಿನ ಕರಾರು ಮಾಡಿಕೊಳ್ಳುತ್ತಾನೆ; 90 ದಿನಗಳೊಳಗೆ ರೂ.80ರಂತೆ 100 ಷೇರುಗಳನ್ನು ಃ ಯಿಂದ ಕೊಳ್ಳುವ ಹಕ್ಕು ಪಡೆದುಕೊಳ್ಳುತ್ತಾನೆ. ಈ ಅವಧಿಯೊಳಗೆ ಆ ಷೇರುಗಳ ಬೆಲೆ ರೂ.92ಕ್ಕೆ ಏರಬಹುದು. ಆಗ ಂ ತನ್ನ ಕೊಳ್ಳುವ ಹಕ್ಕನ್ನು ಚಲಾಯಿಸಿ, ಃ ಯಿಂದ 100 ಷೇರುಗಳನ್ನು ರೂ.80ರಂತೆ ಕೊಂಡು, ಮಾರುಕಟ್ಟೆಯಲ್ಲಿ ರೂ.92ರಂತೆ ವಿಕ್ರಯಿಸುತ್ತಾನೆ. ಂಗೆ ದೊರಕುವ ಲಾಭ ರೂ.1,200ರಲ್ಲಿ ಅಯ್ಕೆ ಹಕ್ಕು ಪಡೆದುಕೊಳ್ಳಲು ಕೊಟ್ಟ ಹಣ ರೂ.500ನ್ನೂ ದಳ್ಳಾಳಿ ಮುಂತಾದ ಖರ್ಚುಗಳನ್ನೂ ಕಳೆದರೆ ಉಳಿದದ್ದು ಅವನ ನಿವ್ವಳ ಲಾಭ. ಅವನ ನಿರೀಕ್ಷೆಯಂತೆ ಷೇರು ಬೆಲೆ ಏರುವ ಬದಲು ಅದು ರೂ.60ಕ್ಕೆ ಇಳಿದರೆ ಅವನಿಗೆ ಸಂಭವಿಸುವ ನಷ್ಟ ರೂ.500ಕ್ಕೆ ಸೀಮಿತವಾಗಿರುತ್ತದೆ. ಅವನು ಷೇರುಗಳನ್ನು ಕೊಳ್ಳಬಾರದೆಂದು ತೀರ್ಮಾನಿಸಿದರೆ ಅವನು ಃಗೆ ಕೊಟ್ಟಿದ್ದ ರೂ.500ನ್ನು ಕಳೆದುಕೊಳ್ಳುತ್ತಾನೆ. ಅವನು ಕ್ರಯ ಆಯ್ಕೆ ಹಕ್ಕಿನ ಕರಾರು ಮಾಡಿಕೊಳ್ಳದೆ 100 ಷೇರುಗಳನ್ನು ಕೊಂಡಿದ್ದಿದ್ದರೆ ಅವನಿಗೆ ಸಂಭವಿಸುತ್ತಿದ್ದ ನಷ್ಟ ರೂ.2,000.

ಆ ಕಂಪನಿಯ ಷೇರು ಬೆಲೆ ರೂ.80 ಆಗಿದ್ದು, ಮುಂದಿನ 90 ದಿನಗಳಲ್ಲಿ ಅದು ರೂ.60ಕ್ಕೆ ಇಳಿಯುವುದಾಗಿ ನರೀಕ್ಷಿಸಿದ್ದರೆ ಆತ ರೂ.400 ಕೊಟ್ಟು 90 ದಿನಗಳೊಳಗೆ ಆ ಕಂಪನಿಯ 100 ಷೇರುಗಳನ್ನು ರೂ.80ರಂತೆ ವಿಕ್ರಯಿಸಲು ಕರಾರು ಮಾಡಿಕೊಳ್ಳಬಹುದು. ಆ ಅವಧಿಯಲ್ಲಿ ಷೇರು ಬೆಲೆ ರೂ.60ಕ್ಕೆ ಇಳಿದಾಗ ಮಾರುಕಟ್ಟೆಯಲ್ಲಿ ಆ ಬೆಲೆಗೆ 100 ಷೇರುಗಳನ್ನು ಕೊಂಡು, ಕರಾರಿನ ಪ್ರಕಾರ ಃಗೆ ರೂ.80ರಂತೆ ವಿಕ್ರಯಿಸುತ್ತಾನೆ. ಕ್ರಯ-ವಿಕ್ರಯ ಬೆಲೆಗಳ ವ್ಯತ್ಯಾಸವಾದ ರೂ.2,000ದಲ್ಲಿ ರೂ.400ನ್ನೂ ದಳ್ಳಾಳಿ ಮುಂತಾದ ಖರ್ಚುಗಳನ್ನೂ ಕಳೆದರೆ ಉಳಿದದ್ದು ಅವನ ಲಾಭ. ಅವನ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲಿ ಷೇರು ಬೆಲೆ ಇಳಿಯದಿದ್ದರೆ ಅವನ ನಷ್ಟ ರೂ.400ಕ್ಕೆ ಸೀಮಿತವಾಗಿರುತ್ತದೆ.

ಮೇಲೆ ವಿವರಿಸಿದ್ದು ಸಟ್ಟಾ ಉದ್ದೇಶದಿಂದ ನಡೆಸುವ ವ್ಯವಹಾರ, ಬೆಲೆ ಏರಿಳಿತದ ನಷ್ಟದ ವಿರುದ್ಧ ರಕ್ಷಣೆಗಾಗಿಯೂ ಆಯ್ಕೆ ಹಕ್ಕಿನ ಕರಾರು ಮಾಡಿಕೊಳ್ಳಬಹುದು. ಂಯ ಬಳಿ ಮೇಲೆ ಹೇಳಿದ ಕಂಪನಿಯ 100 ಷೇರುಗಳಿವೆ. ಅವುಗಳ ಮಾರುಕಟ್ಟೆ ಬೆಲೆ ರೂ.80. ಅದರ ಬೆಲೆ ವ್ಯತ್ಯಾಸವಾಗಬಹುದೆಂಬ ಭಾವನೆಯಿಂದ ಅವನು ರೂ.400ಕ್ಕೆ 90 ದಿನಗಳಿಗೆ ರೂ.80ರಂತೆ ವಿಕ್ರಯ ಆಯ್ಕೆ ಹಕ್ಕು ಕೊಳ್ಳುತ್ತಾನೆ. ಮುಂದಿನ 90 ದಿನಗಳಲ್ಲಿ ಆ ಷೇರು ಬೆಲೆ ಎಷ್ಟೇ ಕಡಿಮೆಯಾಗಲಿ, ತನ್ನ 100 ಷೇರುಗಳನ್ನು ರೂ.80ರಂತೆ ವಿಕ್ರಯಿಸಬಹುದೆಂಬ ಭರವಸೆ ಅವನಿಗುಂಟು. ಒಂದು ವೇಳೆ ಷೇರು ಬೆಲೆ ರೂ.95ಕ್ಕೆ ಏರಿದರೆ ಅವನು ವಿಕ್ರಯ ಹಕ್ಕು ಚಲಾಯಿಸದೆ ರೂ.400ನ್ನು ಕಳೆದುಕೊಳ್ಳಬಹುದು. ಅವನ ಈ ನಷ್ಟಕ್ಕಿಂತ ಮಾರುಕಟ್ಟೆಯಲ್ಲಿ ತನ್ನ 100 ಷೇರುಗಳನ್ನು ಮಾರಿ ಬರುವ ಲಾಭ ಅಧಿಕವಾಗಿರುವುದರಿಂದ ಚಿಂತೆ ಇರುವುದಿಲ್ಲ. ಮೇಲೆ ಹೇಳಿದುದಕ್ಕೆ ವಿಪರ್ಯಯವಾದ ಸಂದರ್ಭದಲ್ಲಿ ಆತ ಕ್ರಯ ಆಯ್ಕೆ ಹಕ್ಕು ಕೊಳ್ಳಬಹುದು.

ಆಯ್ಕೆ ಹಕ್ಕಿನ ವ್ಯವಹಾರದಿಂದ ಹೆಚ್ಚು ಲಾಭ ಗಳಿಸುವ ನಿರೀಕ್ಷೆಯನ್ನು ಸಟ್ಟಾ ವ್ಯಾಪಾರಿ ಹೊಂದಿರುವುದು ಸಾಧ್ಯವಿಲ್ಲ. ಏಕೆಂದರೆ ಹಕ್ಕಿನ ಮೊಬಲಗನ್ನು ನಿಷ್ಕರ್ಷೆ ಮಾಡುವಾಗ ಅಗಾಧ ಲಾಭದ ಸಾಧ್ಯತೆಯನ್ನು ಅದರ ವಿಕ್ರಯದಾರ ತಡೆಯುತ್ತಾನೆ.

ಆಯ್ಕೆ ಹಕ್ಕನ್ನು ಕೊಳ್ಳುವವನು ಅವಧಿಯ ಕೊನೆಯ ವರೆಗೂ ಕಾದಿದ್ದು, ಸಾಧ್ಯವಾದರೆ ಲಾಭ ಪಡೆಯಬೇಕೆಂಬ ಉದ್ದೇಶದಿಂದ ವರ್ತಿಸುವುದಿಲ್ಲ. ಹಕ್ಕಿನ ಅವಧಿಯಲ್ಲೇ ಪೇಟೆಯಲ್ಲಾಗುವ ಬೆಲೆಗಳ ಏರಿಳಿತಗಳ ಉಪಯೋಗ ಪಡೆಯುವುದು ಅವನ ಉದ್ದೇಶ. ಪದೇ ಪದೇ ಕ್ರಯಿಸುವ ಹಾಗೂ ವಿಕ್ರಯಿಸುವ ವ್ಯವಹಾರಗಳ ಒಪ್ಪಂದಗಳನ್ನು ಅವನು ಮಾಡಿಕೊಳ್ಳುತ್ತಾನೆ; ಏಕೆಂದರೆ ಅವನು ಕೊಳ್ಳುವಾಗಲೂ ವಿಕ್ರಯಿಸುವಾಗಲೂ ಅತಿಯಾದ ನಷ್ಟಕ್ಕೆ ಒಳಗಾಗದಂತೆ ಅದಕ್ಕೆ ವ್ಯತಿರಿಕ್ತವಾದ ದಿಕ್ಕಿನಲ್ಲಿ ವ್ಯವಹಾರ ಮಾಡುವ ಹಕ್ಕಿನ ಮೂಲಕ ರಕ್ಷಣೆ ಪಡೆದಿರುತ್ತಾನೆ. ಆದ್ದರಿಂದ ಏರಿಳಿಯುತ್ತಿರುವ ಪೇಟೆಯಲ್ಲಿ ಅವನು ಹಲವಾರು ಲಾಭಗಳನ್ನು ಪಡೆಯುತ್ತಾನೆ.

ಹಕ್ಕಿನ ವ್ಯವಹಾರದಿಂದ ಸಟ್ಟಾ ವ್ಯಾಪಾರಗಳಿಗೂ ವರ್ತಕರಿಗೂ ಉತ್ಪಾದಕರಿಗೂ ಕೃಷಿಕರಿಗೂ ರಕ್ಷಣೆ ದೊರೆಯುತ್ತದೆ. ಹಕ್ಕನ್ನು ಕೊಳ್ಳುವವನಿಗೆ ನಷ್ಟಸಂಭವವಿಲ್ಲ. ಪೇಟೆ ಅವನಿಗೆ ವ್ಯತಿರಿಕ್ತವಾಗಿ ವರ್ತಿಸಿದರೂ ಅವನಿಗೆ ಲಾಭವೇ ಆಗುತ್ತದೆ. ಉದಾಹರಣೆಗೆ, ಕೊಳ್ಳುವ ಹಕ್ಕನ್ನು ಕೊಂಡುಕೊಳ್ಳುವ ಬೇಸಾಯಗಾರ ತಾನು ಉತ್ಪಾದಿಸುವ ಪದಾರ್ಥದ ಬೆಲೆ ಪೇಟೆಯಲ್ಲಿ ಇಳಿದರೂ ನಷ್ಟವಾಗದಂತೆ ವಿಮೆಯ ರಕ್ಷಣೆ ಹೊಂದಿದಂತಾಗುತ್ತದೆ. ಒಂದು ವೇಳೆ ಆ ಪದಾರ್ಥದ ಬೆಲೆ ಏರಿದ್ದೇ ಆದರೆ ಅದರಿಂದ ಅವನಿಗೆ ಲಾಭವೇ ದೊರಕುತ್ತದೆ.

ಇತರ ಬಗೆಯ ವಾಯಿದಾ ಕರಾರುಗಳೊಂದಿಗೆ ಹಕ್ಕು ಕರಾರುಗಳನ್ನು ಹೋಲಿಸಿದರೆ ಇವಕ್ಕೆ ಕೆಲವು ವಿಶಿಷ್ಟ ಅನುಕೂಲಗಳಿರುವುದು ವ್ಯಕ್ತವಾಗುತ್ತದೆ. ಉಳಿದ ಕರಾರುಗಳಲ್ಲಿ ಭಾಗವಹಿಸುವವರ ನಷ್ಟಸಂಭವಕ್ಕೆ ಮಿತಿ ಇಲ್ಲ; ಅವು ಮುಂಚೆಯೇ ಗೊತ್ತಿರುವುದೂ ಇಲ್ಲ. ಆದರೆ ಕ್ರಯ ಅಥವಾ ವಿಕ್ರಯ ಹಕ್ಕುಗಳ ಒಡಂಬಡಿಕೆದಾರರಿಗೆ ನಷ್ಟ ಸಂಭವ ಮುಂಚೆಯೇ ಗೊತ್ತಿರುತ್ತದೆ; ಅಲ್ಲದೆ ಅದನ್ನು ಪರಿಮಿತಗೊಳಿಸಲಾಗುತ್ತದೆ.

ಮುಖ್ಯವಾಗಿ ಎರಡು ಬಗೆಯ ಜನರಿಗೆ ಇಂಥ ಹಕ್ಕುಗಳು ಬಹಳ ಉಪಯುಕ್ತವಾಗಿವೆ: 1. ಮಿತವಾದ ಆರ್ಥಿಕಾನುಕೂಲಗಳಿದ್ದಾಗ್ಯೂ ಸಟ್ಟಾ ವ್ಯಾಪಾರ ಮಾಡುವ ಇಚ್ಛೆ ಹೊಂದಿರುವರು. 2. ಮಿತವಾದ ನಷ್ಟ ಸಂಭವಕ್ಕೆ ಮಾತ್ರವೇ ಒಳಪಟ್ಟು ಸಟ್ಟಾ ವ್ಯಾಪಾರ ಮಾಡಬಯಸುವವರು.

ಆಯ್ಕೆ ಹಕ್ಕು ವ್ಯವಹಾರಗಳ ಬಗ್ಗೆ ತೀವ್ರ ವಿರೋಧವೂ ಉಂಟು. ಇವು ಸಟ್ಟಾ ವ್ಯವಹಾರವನ್ನು ಪ್ರೋತ್ಸಾಹಿಸುವುವೆಂಬುದೂ ಇವು ಜೂಜಿಗೆ ಎಡೆ ಕೊಡುವುವೆಂಬುದೂ ಈ ವಿರೋಧಕ್ಕೆ ಕಾರಣಗಳು.

ಆದ್ದರಿಂದ ವ್ಯವಸ್ಥಿತ ವಿನಿಮಯ ಮಾರುಕಟ್ಟೆಯ ನಿಬಂಧನೆಗಳು ಈ ಬಗೆಯ ವ್ಯವಹಾರಗಳಿಗೆ ಆಸ್ಪದ ನೀಡಬಹುದು ಅಥವಾ ನೀಡದೆಯೂ ಇರಬಹುದು.

ಭಾರತದಲ್ಲಿ ಇಂಥ ವ್ಯವಹಾರವನ್ನು ತೇಜಿ-ಮಂದಿ ವ್ಯವಹಾರವೆಂದು ಕರೆಯುತ್ತಾರೆ. ಸಟ್ಟಾ ವ್ಯಾಪಾರಕ್ಕೆ ಇದು ಅನುಕೂಲಕರ ಸಾಧನವಾದ್ದರಿಂದ ಹಲವರಿಗೆ ಪ್ರಿಯವಾಗಿದೆ.								 (ಜಿ.ಬಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ